Sunday, July 5, 2009

ಇಂಗು ತಿನ್ನಬೇಡಿ.

 ಪ್ರಸಂಗ ಒಂದು.
 ನಾನಾಗ ವೈದ್ಯಕೀಯ  ವ್ಯಾಸಂಗದ ಅಂತಿಮ ವರ್ಷದಲ್ಲಿದ್ದೆ,ರಜೆಯಲ್ಲಿ ಊರಿಗೆ ಬರುತ್ತಿದ್ದವ ನನ್ನೆದುರಿಗೆ ಸಿಕ್ಕಿದ ನನ್ನ ಸಂಬಂದಿಕ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ನೋಡಿ  ಅಲ್ಲೇ ನಿಂತೆ.ಆರು ತಿಂಗಳಲ್ಲಿ ಹತ್ತು ವರ್ಷ ಪ್ರಾಯ ಜಾಸ್ತಿ ಆದವರಂತೆ ಕಾಣುತ್ತಿದ್ದವನನ್ನು ವಿಚಾರಿಸಿದಾಗ ಸಿಕ್ಕಿದ ವಿಷಯವಿಷ್ಟು.ಆರು ತಿಂಗಳ ಹಿಂದೆ ಅವನಿಗೆ ಜ್ವರ ಶುರುವಾಗಿತ್ತಂತೆ.ಆಗ ನಮ್ಮ ಪರಿಸರದಲ್ಲಿ ಒಬ್ಬ ಹೋಮಿಯೋಪತಿ ವೈದ್ಯರಿದ್ದರು.ಅವರಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ   ಈ ಹುಡುಗ ಒಬ್ಬ.ಅವರೇನೋ ಹೇಳಿದ್ದರಂತೆ ಈ ಕಾಯಿಲೆ ವಾಸಿ ಆಗದ್ದು,ಇನ್ನು ಬದುಕುವ ಸಾಧ್ಯತೆ ಕಡಿಮೆ ಅಂತ.ಅದನ್ನ ನಂಬಿ ಈ ಹುಡುಗ ವಿದ್ಯಾಭ್ಯಾಸ ಬಿಟ್ಟು ಮನೆಯಲ್ಲಿ ಸಾವನ್ನು ಕಾಯುತ್ತ ಕುಳಿತಿದ್ದ.ಅವನಿಗೆ ಆಗಿದ್ದಾದರೂ ಏನು ?ಸುಲಭವಾಗಿ ವಾಸಿಯಾಗಬಹುದಿದ್ದ ಕ್ಷಯ ರೋಗವಷ್ಟೇ.ಇದೇನೂ  ಅಜ್ಜಿ ಕಥೆಯಲ್ಲ.೧೯೭೮ ಇಸವಿಯಲ್ಲಿ ನಡೆದ ಘಟನೆ.ನಾನಾಗ ವಿದ್ಯಾರ್ಥಿಯಾದ ಕಾರಣ, ನಮ್ಮೂರಲ್ಲಿದ್ದ ವೈದ್ಯರ ಮೂಲಕ ಅವನಿಗೆ ಚಿಕಿತ್ಸೆ ಕೊಡಿಸಿ ಕಾಯಿಲೆ ವಾಸಿ ಆದ ಮೇಲೆ ಅವನ ವ್ಯಾಸಂಗ ಮುಂದುವರಿದು ಇಂದು ಒಂದು ಪ್ರತಿಷ್ಟಿತ ಉಕ್ಕು ಕಾರ್ಖಾನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ.ಆ ಹೋಮಿಯೋಪತಿ  ವೈದ್ಯ ಮಹಾಶಯನ ಮಗ ಅಪ್ಪನ ವೃತ್ತಿ ಮುಂದುವರಿಸಿದ್ದಾನೆ.ಈಗಲೂ ಇಂತಹ ಸಲಹೆ ಕೊಡುತ್ತಲೇ ಇದ್ದಾನೆ ಅಂದರೆ ನಮ್ಮ ಜನರ ಹುಂಬತನ ಎಷ್ಟು ಎಂದು ಅಂದಾಜು ಮಾಡಬಹುದು.ಇವರಿಗೆ ಬಲಿಯಾಗುವುದು ಅವಿದ್ಯಾವಂತರಾಗಿದ್ದಲ್ಲಿ ಅರ್ಥ ಮಾಡಿಕೊಳ್ಳಬಹುದಿತ್ತು.ಆದರೆ ಅಲ್ಲಿ ಹೋಗುವ ರೋಗಿಗಳಲ್ಲಿ ವಿದ್ಯಾವಂತರೇ ಹೆಚ್ಚು.
ಇದೀಗ  ಐದಾರು ವರ್ಷಗಳ ಹಿಂದೆ ಇದೇ ವೈದ್ಯ ಮಹಾಶಯನ ಸಂಬಂದಿಯೋರ್ವ ನನ್ನ ಬಳಿ ಬಂದಿದ್ದರು.ಅವರದ್ದೂ ಇದೇ ಕಥೆ.ಬಾಯಿಯಲ್ಲೇನೋ ಹುಣ್ಣು ಅಂತ ಇದೇ ವೈದ್ಯರ ಬಳಿ ಚಿಕಿತ್ಸೆ,ಹೆಚ್ಚು ಕಡಿಮೆ ಎರಡು ವರ್ಷ,ಪಡೆದರೂ ಪ್ರಯೋಜನವಾಗದೆ ಬೆಂಗಳೂರಿಗೆ ಹೋಗಲು ಸಲಹೆ ಬೇಕಾಗಿತ್ತಂತೆ.ಅಲ್ಲಿ ಹೋಗಿ ತೋರಿಸಿದಾಗ ಬಂದ ಫಲಿತಾಂಶ ನಾನು ಗ್ರಹಿಸಿದ್ದೇ ಆಗಿದ್ದು ಮಾತ್ರ ಶೋಚನೀಯ.ಅವರಿಗೆ ಕ್ಯಾನ್ಸರ್ ಆಗಿತ್ತು.ಚಿಕಿತ್ಸೆ ಬಹಳ ಹಿಂದೆ ಆಗಿದ್ದರೆ ವಾಸಿಯಾಗುತ್ತಿತ್ತು,ಈಗ ಹದ್ದು ಮೀರಿ ಹೋಗಿದೆ ಅಂತ ತಜ್ಞರು ಅವರನ್ನು ಹಿಂದೆ ಕಳುಹಿಸಿದ್ದರು ಮತ್ತು ಆರು ತಿಂಗಳಲ್ಲಿ ವಿಧಿವಶವಾದರು.ಆಗ ಈ ವೈದ್ಯ ಮಹಾಶಯ ಹೇಳಿದರಂತೆ,ಅವರು ಇನ್ನೂಹೋಮಿಯೋಪತಿ  ಚಿಕಿತ್ಸೆ ಮಾಡಿಸುತ್ತಿದ್ದರೆ ಕ್ಯಾನ್ಸರ್ ವಾಸಿಯಾಗುತ್ತಿತ್ತು ಅಂತ!
ಪ್ರಸಂಗ ಎರಡು.
ನನ್ನ ಕುಟುಂಬದಲ್ಲಿ ಕೆಲವು ಪಾರಂಪರಿಕ ವೈದ್ಯರಿದ್ದಾರೆ.ಎಲ್ಲರೂ ಎಲುಬು ತಜ್ಞರೇ.೧೯೩೦ ರಿಂದ ಈ ವೃತ್ತಿ ಮಾಡುತ್ತಿದ್ದವರನ್ನು ನನಗೆ ನೋಡಿ ಗೊತ್ತು.ಆಗಿನ ಕಾಲದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಎಲುಬು ನಿಜವಾಗಿಯೂ ಮುರಿತಕ್ಕೊಳಗಾಗಿದೆಯೋ ಎಂದು ನೋಡುವ ಪರಿಸ್ತಿತಿ ಇರಲಿಲ್ಲ.ಹಾಗಾಗಿ ಈ ವೈದ್ಯರು ಹೇಳಿದ್ದೇ ನಿಜ ಎಂದು ತಿಳಿದು ಚಿಕಿತ್ಸೆ ಪಡೆಯುತ್ತಿದ್ದರು.ಎಷ್ಟೋ ಸಂದರ್ಭದಲ್ಲಿ ವಾಸಿಯೂ ಆಗುತ್ತಿತ್ತು.
ಒಂದು ಬಾರಿ ನನ್ನ ತಂದೆಯ ತಂಗಿ ಕೈ ಮುರಿದುಕೊಂಡು ನಮ್ಮ ಮನೆಗೆ ಬಂದು ನಮ್ಮ ಒಬ್ಬ ದೊಡ್ಡಪ್ಪನಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ಹೇಳಿದರು.ನಾನೂ ಇದನ್ನೆಲ್ಲಾ ನಂಬುವ ಜಾತಿಯಲ್ಲ.ಅವರೋ ಬಿಡುವ ಜಾತಿಯಲ್ಲ.ಆಗ ನಾನು ನನ್ನ ವೈದ್ಯಕೀಯ ಪದವಿ ಪಡೆದು ಹೌಸ ಸರ್ಜನ್ ಆಗಿ ಕೆಲವೇ ದಿನ ಆಗಿತ್ತು.ಏನೇ ಹೇಳಿದರೂ ಕೇಳದೆ ನಮ್ಮ ಸವಾರಿ, ನಮ್ಮದೇ ಕುಟುಂಬದ ವೈದ್ಯರು,ಅವರ ಬಳಿ ಹೋಯಿತು.ಅವರೇನೋ ನೋಡಿ ಚಿಕಿತ್ಸೆ ಮಾಡಿ ಕಳುಹಿಸಿ ಬಿಟ್ಟರು.ನಾನು ನನ್ನ ಕೆಲಸದ ಮೇಲೆ ಹಾಸ್ಟೆಲ್ ಸೇರಿದೆ.
ಒಂದು ತಿಂಗಳ ಬಳಿಕ ಊರಿಗೆ ಬಂದಾಗ ನಮ್ಮ ಅತ್ತೆಯ ಕೈ ಬಾತು ಹೋಗಿತ್ತು.ನನ್ನ ಒತ್ತಾಯದ ಮೇರೆಗೆ ಎಕ್ಸ್ ರೆ ಮಾಡಿ ನೋಡಿದಾಗ ಕೈಯ ಎರಡೂ ಎಲುಬು ತುಂಡಾಗಿ ಅಡ್ಡದಿಡ್ಡಿಯಾಗಿ ಇದ್ದದ್ದು  ಯಾರಿಗೂ ಗೊತ್ತಾಗುತ್ತಿತ್ತು.ಆಮೇಲೆ ಸರಿಯಾದ ಎಲುಬು ತಜ್ಞರ ಸಲಹೆ ಮೇರೆಗೆ ಚಿಕಿತ್ಸೆಯಾಗಿ ಸರಿಯಾದರೆನ್ನಿ.ಇದೂ ವಿದ್ಯಾವಂತರೇ ಮಾಡಿದ ಕೆಲಸ.
ಪ್ರಸಂಗ ಮೂರು.
ನಾನು ವೃತ್ತಿ ಜೀವನ ಶುರು ಮಾಡಿ ಸ್ವಲ್ಪ ದಿನವಾಗಿತ್ತು.ನನ್ನ ಸ್ನೇಹಿತರೊಬ್ಬರಿಗೆ ನಾಯಿ ಕಚ್ಚಿತ್ತು.ಆಗ ಹೊಕ್ಕಳಿನ ಸುತ್ತೂ ೧೦ ಚುಚ್ಚುಮದ್ದು ಕೊಡಬೇಕಾಗಿತ್ತು.ಈಗಿನ ಹಾಗೆ ಕೈಗೆ ಚುಚ್ಚುವ ಇಂಜೆಕ್ಷನ್ ಅಲ್ಲ.ಅವರೇನೋ ನೋವಿಗೆ ಹೆದರಿ ಹತ್ತಿರದ ನಾಟಿ ವೈದ್ಯರೊಬ್ಬರ ಬಳಿ ಹೋಗಿದ್ದರು.ರಾತ್ರಿ ಸುಮಾರು ಎರಡು ಘಂಟೆಗೆ ನನಗೆ ತುರ್ತು ಕರೆ ಬಂತು.ಅವರು ಏನೇನೋ ಮಾತಾಡುತ್ತಿದ್ದರು,ಹುಚ್ಚರ ಹಾಗೆ.ಚಿಕಿತ್ಸೆ ನೀಡಿದ ಮಹಾಶಯನ ಪ್ರಕಾರ ನಾಟಿ ಔಶದಿಯಲ್ಲಿ ಮೊದಲು ಹುಚ್ಚು ಹಿಡಿಸಿ ಆಮೇಲೆ ಬಿದಿಸುವುದಂತೆ!ಸರಿಯಾಗಿ ನೋಡಿದಾಗ ರೋಗಿಗೆ ದತ್ತೂರದ ಸೊಪ್ಪಿನ ಚಿಕಿತ್ಸೆ ಕೊಡಲಾಗಿತ್ತು.ಈ ವೈದ್ಯರು ಏನು  ಮಾಡುತ್ತಾರೆ ಗೊತ್ತೇ?ಮೊದಲು ದತ್ತುರದ ಸೊಪ್ಪು ತಿನ್ನಿಸುವುದು.ಆಗ ರೋಗಿಗೆ ಮತಿ ಭ್ರಮಣೆ ಆದ ಹಾಗೆ ಕಾಣಿಸುತ್ತದೆ.(ಹಾಗೆ ಎಲ್ಲರಿಗೂ ಒಂದೇ ಪ್ರಮಾಣದಲ್ಲಿ ಆಗುವುದಿಲ್ಲ)ಆದವರಿಗೆ ಹುಚ್ಚು ನಾಯಿ ಕಚಿದ್ದು,ಇಲ್ಲದವರಿಗೆ ಕಚ್ಚಿದ ನಾಯಿ ಹುಚ್ಚಲ್ಲ ಎಂದು ತೀರ್ಮಾನ ಮಾಡಿ ದುಡ್ಡು ವಸೂಲು ಮಾಡುತ್ತಾರೆ.ಆಮೇಲೆ ಅವರನ್ನು ರಾತ್ರಿಯಲ್ಲಿ ಆಸ್ಪತ್ರೆಗೆ ಸೇರಿಸಬೇಕಾಯಿತು.ಅಂತೂ ಕೊನೆಗೂ ಇಂಜೆಕ್ಷನ್ ಕೊಡಲೇ ಬೇಕಾಯಿತು.ಅಲ್ಲದೆ ಆಸ್ಪತ್ರೆ ವಾಸವೂ ಆಯಿತು.
ಇಲ್ಲೊಂದು ತಮಾಷೆ ಏನು ಗೊತ್ತೇ?ಹೀಗೆ ಇಂಗು ತಿಂದ ಮಂಗನಾದ ವಿಷಯ ಯಾರೂ ಯಾರಿಗೂ ಹೇಳುವುದಿಲ್ಲ.ಹಾಗಾಗಿ ಇಂತಹ ವೈದ್ಯ ಮಹಾಶಯರ ವ್ಯವಹಾರಕ್ಕೆ ಏನೂ ತೊಂದರೆಯಾಗುವುದಿಲ್ಲ.ಅದೇ ಒಬ್ಬ ಸರಿಯಾಗಿ ಕಲಿತ ಆಧುನಿಕ ವೈದ್ಯ ಪದ್ದತಿಯವರಲ್ಲಿ ಹೀಗಾದಲ್ಲಿ ಕೋರ್ಟಿನ ಕಟಕಟೆ  ಹತ್ತುವ ವರೆಗೆ ಅಥವಾ ಅವನ ಆಸ್ಪತ್ರಗೆ ಬೆಂಕಿ ಹಾಕುವ ವರೆಗೂ ಜನ ತಯಾರು.
ಪ್ರಸಂಗ ಇನ್ನೊಂದು.
ಇಲ್ಲೊಬ್ಬ ಇನ್ನೊಬ್ಬ ಪಂಡಿತ ಇದ್ದಾರೆ.ಇವ್ರು ಕಾಮಾಲೆ ರೋಗ ತಜ್ಞ.ಕಾಮಾಲೆ  ರೋಗದಲ್ಲಿ ಎ,ಬಿ,ಸಿ,ಡಿ ಮತ್ತು ಇ ಎಂಬ ವಿಧಗಳಿವೆ.ಸಾಮನ್ಯವಾಗಿ ಬರುವ ಕಾಮಾಲೆ ಎ  ಜಾತಿಯ ವೈರಸ್ನಿಂದ ಬರುತ್ತದೆ,ಇದು ಸುಮಾರು ಆರು ವಾರಗಳಲ್ಲಿ ಸ್ವಲ್ಪ ಮಟ್ಟಿನ ಆಹಾರದ ಪಥ್ಯದಿಂದ ತಾನಾಗೇ ವಾಸಿಯಾಗುತ್ತದೆ.ಆದರೆ ನಮ್ಮ ಜನ ಕೇಳಬೇಕಲ್ಲ.ಕಾಮಾಲೆಗೆ ಆಧುನಿಕ ಪದ್ದತಿಯ ಚಿಕಿತ್ಸೆ ಕೊಡಿಸಬಾರದು,ನಾಟಿ ಮದ್ದೇ ಸರಿ ಎಂಬ ಒಂದು ತೀರ್ಮಾನ ಅಕ್ಕ ಪಕ್ಕದವರೆಲ್ಲಾ ಸೇರಿ ಮಾಡಿರುತ್ತಾರೆ.
ಈ ಎ ಜಾತಿಯ ರೋಗ ಪ್ರಕಾರಕ್ಕೆ ಅವರು ಮದ್ದು ಮಾಡುವುದರಲ್ಲಿ ಎತ್ತಿದ ಕೈ.ಹೇಗಾದರೂ ಗುಣವಾಗುತ್ತದೆ.ಮತ್ತೇನು?ಅದೂ ಎಂತಹ ಪಥ್ಯ?ತಲೆಗೂ ಎಣ್ಣೆ ಹಾಕಬಾರದು.ಹಲಸಿನ ಮರದ ಮಂಚದಲ್ಲಿ ಕೂಡ ಮಲಗಬಾರದು!ಹಣ್ಣು ತಿನ್ನುವುದು ಬಿಡಿ,ಹಳದಿ ಬಣ್ಣ ಯಾಕೆ ಇಷ್ಟು ವರ್ಜ್ಯ ಎಂದು ಮಾತ್ರ ಯಾರೂ ಹೇಳುವುದಿಲ್ಲ.

ಇತ್ತೀಚಿಗೆ,ಯಾವಾಗಲೂ,ಮಗುವಾಗಿದ್ದಲ್ಲಿಂದ,ನನ್ನ ಬಳಿ ಬರುತ್ತಿದ್ದ,ಈಗ ಇಂಜಿನೀರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಹುಡುಗ ಇದೇ ವೈದ್ಯರಲ್ಲಿ ಹೋಗಿದ್ದ.ಆ ಮಹಾಶಯನೋ,ಒಂದು ತಿಂಗಳ ಕಾಲ ಔಷಧಿ ಕೊಟ್ಟದ್ದೇ ಕೊಟ್ಟದ್ದು.ನಡೆಯಲೂ ಕಷ್ಟವಾಗುವಂತಹಾ ಸುಸ್ತು ಅಂತ ನನ್ನ ಬಳಿ ಬಂದಾಗಲೇ ನನಗೆ ಈ ವಿಚಾರ ಗೊತ್ತಾಗಿದ್ದು.ಏನೋ ಆ ಹುಡುಗನ ಆರೋಗ್ಯ ಮೊದಲು ಚೆನ್ನಾಗಿದ್ದ ಕಾರಣ ದುರಂತವೇನೂ ಸಂಭವಿಸಲಿಲ್ಲ.

ನಾನು ಖಂಡಿತವಾಗಿಯೂ ಆಯುರ್ವೇದ ಅಥವಾ ನಾಟಿ ಮದ್ದಿನ ವಿರೋಧಿಯಲ್ಲ.ಆದರೆ ನಾಟಿ ಮದ್ದಿನ ಹೆಸರಿನಲ್ಲಿ ಜನರನ್ನು ವಂಚಿಸುವ ಜನರ ವಿರೋಧಿ,ಅಷ್ಟೇ.ಈಗೀಗ ನಾಟಿ ಮದ್ದಿನ ಹೆಸರಲ್ಲಿ ಆಗುವ ಮೋಸ  ನೋಡಿದರೆ ಎಷ್ಟು ಬೇಜಾರಾಗುತ್ತದೆ ಎಂದು ತಿಳಿಯಬೇಕಾದರೆ ನಮ್ಮ ವೃತ್ತಿಯಲ್ಲಿ ಇದ್ದವರಿಗೆ ಮಾತ್ರ ಸಾಧ್ಯ.ತೂಕ ಕಡಿಮೆ ಮಾಡಿಕೊಳ್ಳಬೇಕೆ,ಸಕ್ಕರೆ ಖಾಯಿಲೆಯೇ,ರಕ್ತದ ಒತ್ತಡವೇ.ಎಲ್ಲದಕ್ಕೂ ನಾಟಿ ಔಷಧಿ ಕೊಡುವ ಜನರಿದ್ದಾರೆ.ಆದರೆ ಅವರ್ಯಾರೂ ಪ್ರಸ್ತುತ ಇರುವ ಅಧುನಿಕ ಪದ್ದತಿಯ ಚಿಕಿತ್ಸೆಯನ್ನ ಬಿಟ್ಟು,ಔಷಧಿ ಕೊಡುವುದಿಲ್ಲ.ಹಾಗಾದರೆ ಅವ್ರು ಯಾಕೆ ತಾನೇ ಚಿಕಿತ್ಸೆ ಕೊಡಬೇಕು?
ನಮ್ಮ ಜನರಲ್ಲಿ ಒಂದು ತರನಾದ ಭಾವನೆ ಇದೆ.ಯಾವುದೇ ವಿಷಯವಿರಲಿ,ತಮಗೆ ಗೊತ್ತಿಲ್ಲ ಎಂದು ಒಪ್ಪಿಕೊಳ್ಳುವುದಿಲ್ಲ.ಎಲ್ಲದಕ್ಕೂ ತಮ್ಮದೇ ಅರ್ಥ,ಪರಿಹಾರ ಹುಡುಕುವ ಜನ ಕೊನೆಗೆ ಕೈ ಮೀರಿ ಹೋದಾಗ ಪರಿಣಿತರ ಬಳಿ ಹೋಗುತ್ತಾರೆ.ಅದರ ಬದಲು ಆವುದೇ ಸಮಸ್ಯೆ ಇರಬಹುದು,ತಜ್ಞರ ಸಲಹೆ ಪಡೆದರೆ ಹಣ,ಶ್ರಮ,ಚಿಂತೆ ಎಲ್ಲವನ್ನೂ ಉಳಿಸಬಹುದಲ್ಲಾ?

-- 

No comments:

About Me

My photo
Puttur, Karnataka, India
Medical doctor,arrogant,self centred,can be very helping. Concerned about the falling standards in ethics.Advocate discretion in lifestyle instead of regretting after the fact